ಬಮ್ಮನಹಳ್ಳಿ ವೆಬ್ ಸೈಟ್ ಗೆ ಸುಸ್ವಾಗತ

ಹಾನಗಲ್ಲ ತಾಲ್ಲೂಕ ಬಗ್ಗೆ ಮಾಹಿತಿ ಲಭ್ಯ    

ದಾಸ ಸಾಹಿತ್ಯದಲ್ಲಿಯೆ ವಿಶಿಷ್ಟ ವ್ಯಕ್ತಿತ್ವದವರು ಕನಕದಾಸರು. 

imagesಹಾವೇರಿ ಜಿಲ್ಲೆಯ ಬಂಕಾಪೂರ ಪ್ರದೇಶಕ್ಕೆ ಕುರುಬ ಜನಾಂಗದ ಶ್ರೀ ಬೀರಪ್ಪ ಮತ್ತು ಶ್ರೀಮತಿ ಬಚ್ಚಮ್ಮ. ದಂಪತಿಗಳ ಏಕೈಕ ಪುತ್ರನೇ ತಿಮ್ಮಪ್ಪ. ತಂದೆಯ ಅಕಾಲ ಮೃತ್ಯುವಿನಿಂದ ಕಿರಿಯ ವಯಸ್ಸಿನಲ್ಲಿ ತಿಮ್ಮಪ್ಪ ನಾಯಕನಾದ. ಭೂಮಿಯನ್ನು ಅಗೆಯಿಸುತ್ತಿರುವಾಗ ಅಪಾರ ನಿಧಿ ದೊರೆಯಿತು. ಅದನ್ನು ತನ್ನ ವಿಲಾಸಿ ಜೀವನಕ್ಕೆ ಬಳಸಿಕೊಳ್ಳದೆ ಪ್ರಜೆಗಳ ಹಿತರಕ್ಷಣೆಗೆ ಹಾಗೂ ಧಾರ್ಮಿಕ ಕಾರ್ಯಗಳಿಗಾಗಿ ಬಳಸಿ ಜನರಿಂದ ಕನಕದಾಸನೆಂಬ ಪ್ರಶಂಸೆಗೆ ಪಾತ್ರನಾದ. ಯುದ್ಧಭೂಮಿಯಲ್ಲಿ ಬಲವಾಗಿ ಗಾಯಗೊಂಡು ಮರಣಾವಸ್ಥೆಯಲ್ಲಿರುವಾಗ ಯಾವುದೋ ಚೇತನ ಶಕ್ತಿ ಶುಶ್ರೂಷೆಯನ್ನು ಮಾಡಿದಂತಾಗಿ, ‘ಕನಕಾ ಇನ್ನಾದರೂ ನನ್ನ ದಾಸನಾಗು’ ಎಂದು ಅಶರೀರವಾಣಿ ನುಡಿಯುತ್ತೆ. (೧೫೦೮-೧೯೦೬) ಹದಿನಾರನೇ ಶತಮಾನ ಎಂಬ ಒಮ್ಮತ ಅಭಿಪ್ರಾಯಕ್ಕೆ ಬರಲಾಗಿದೆ. ಪ್ರತಿ ವರ್ಷವೂ ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು ಆಚರಿಸಲಾಗುತ್ತದೆ.

ಕನಕದಾಸರ ಹುಟ್ಟೂರು ಬಾಡ. ಇದೂ ಹಾವೇರಿ ಜಿಲ್ಲೆಯಲ್ಲಿದೆ. ಈ ಬಾಡದಲ್ಲಿ ಕನಕದಾಸರ ಅರಮನೆ ಇದ್ದ ಬಗ್ಗೆ ದಾಖಲೆಗಳು ದೊರಕಿವೆ. ಅದರ ಉತ್ಖನನ ಕಾರ್ಯ ಸಾಗಿದೆ. ಬಾಡದ ಅಭಿವೃದ್ಧಿಯನ್ನು ಪ್ರಾಧಿಕಾರ ಕೈಗೆತ್ತಿಕೊಂಡಿದೆ. ಕೆಲವು ಸ್ಥಳಗಳು ವ್ಯಕ್ತಿ ಮಹಿಮೆಯಿಂದಾಗಿ ಪ್ರಖ್ಯಾತಿಗೆ ಬರುತ್ತವೆ. ಕೆಲವು ಸ್ಥಳಗಳ ಮಹಿಮೆಯಿಂದಾಗಿ ವ್ಯಕ್ತಿಗಳು ಪ್ರಖ್ಯಾತಿ ಪಡೆಯುತ್ತಾರೆ. ಕಾಗಿನೆಲೆ, ಬಾಡ ಹಾಗೂ ಕನಕದಾಸರು ಸಂದರ್ಶಿಸಿದ ಸ್ಥಳಗಳು ಕನಕದಾಸರ ಮಹತ್ವದೊಂದಿಗೇ ಮಹತ್ವ ಪಡೆದಿವೆ. ಇದು ಇತಿಹಾಸ. ಸಂಸ್ಕೃತಿಯ ಅಂತಸ್ಸತ್ವ. 

ದಾಸಶ್ರೇಷ್ಠ :

ಕನಕದಾಸರು (೧೫೦೮-೧೬೦೬) ಸಾಮಾನ್ಯ ಕಾಲದಲ್ಲಿ (ಕುರುಬ) ಹುಟ್ಟಿದರೂ ತಮ್ಮ ಸ್ವಸಾಮರ್ಥ್ಯ ಮತ್ತು ಪ್ರತಿಭೆಯಿಂದ ಹಿರಿಮೆ ಗಳಿಸಿದವರು. ಕನಕರು ಕೆಳಸ್ತರದಿಂದ ಬಂದವರಾದ್ದರಿಂದ, ಕೆಳಜಾತಿಯವರ ನೋವಿನ ಅರಿವು ಹಾಗೂ ಡಣ್ಣಾಯಕ(ಒಂದು ಪ್ರದೇಶದ ಮುಖ್ಯಸ್ಥ)ರಾಗಿದ್ದರಿಂದ ಮೇಲ್ವರ್ಗದ ಜೀವನದ ಅನುಭವ ಅವರದಾಗಿತ್ತು. ತಮ್ಮ ಸಮಕಾಲೀನ ದಾಸರಂತೆ ನಡೆದ ದಾರಿಯಲ್ಲೇ ನಡೆಯದ ಕನಕದಾಸರು, ಏಕಮುಖಿಯಾಗಿ ಕೇವಲ ಹರಿಯನ್ನು ಹೊಗಳದೆ, ಆರು ಬದುಕಿದರಯ್ಯ ಹರಿ ನಿನ್ನ ನಂಬಿ ಎಂದು ವೈಚಾರಿಕ ನೆಲೆಯಲ್ಲಿ ಹರಿಯನ್ನು ಪ್ರಶ್ನಿಸಿದ್ದೂ ಉಂಟು. ಅವರ ವೈಚಾರಿಕ ಮನೋಭಾವದಿಂದಾಗಿ, ಅವರು ತಮ್ಮ ಸಮಕಾಲೀನ ಬದುಕಿನ ನೈಜ ಚಿತ್ರಣವನ್ನು ಮುಂದಿನ ಜನಾಂಗಕ್ಕೆ ಕೊಡಲು ಸಾಧ್ಯವಾಗದೆ ಇರುವ ಕಾರಣಕ್ಕಾಗಿಯೇ ಕನಕದಾಸರು ದಾಸರಲ್ಲಿ ಅತೀ ಮುಖ್ಯರೆನ್ನಿಸುತ್ತಾರೆ 
 


ಕನಕದಾಸರ ಸಾಹಿತ್ಯ

ಕನಕದಾಸರು ಕೇವಲ ಹರಿ ಭಕ್ತರಾಗಿ, ವೈಷ್ಣವ ಮತಾನುಯಾಯಿಯಾಗಿ ಉಳಿಯದೆ ಶೈವ, ಶ್ರೀ ವೈಷ್ಣವ ಮತ್ತು ಮಾಧ್ವ ಮತಗಳಲ್ಲಿಯ ಉತ್ತಮಾಂಶಗಳಿಂದ ಪ್ರಭಾವಿತರಾಗಿದ್ದರು. ರಾಮಾನುಜೀಯರಾಗಿದ್ದ ತಾತಾಚಾರಿಯವರ ಹಾಗೂ ಮಾಧ್ವರಾಗಿದ್ದ ವ್ಯಾಸರಾಯರ ಪ್ರಭಾವಕ್ಕೊಳಗಾಗಿ ಹರಿದಾಸರಲ್ಲದೆ, ತಮ್ಮ ಬರವಣಿಗೆಯಲ್ಲಿ ಜಾತಿ-ಮತ-ಪಂಥ ಮೀರಿದ ಸಮಾನತೆಯನ್ನು ಬೋಧಿಸಿದರು. ಕನಕದಾಸರು ತಮ್ಮ ಜೀವಿತಾವಧಿಯಲ್ಲಿ ಎರಡು ಕಾವ್ಯಗಳನ್ನು ರಚಿಸಿದ್ದಾರೆ. ಮೋಹನ ತರಂಗಿಣಿ (ಶೃಂಗಾರ ರಸ ಕಾವ್ಯ) ಮತ್ತು ನಳ ಚರಿತ್ರೆ (ನಳ-ದಮಯಂತಿಯರ ಪ್ರೇಮ ಕಾವ್ಯ) ಅವರ ಕಾವ್ಯತ್ವಕ್ಕೆ ಹಿಡಿದ ಕನ್ನಡಿಯಂತಿವೆ. ಹರಿಭಕ್ತ ಸಾರ (ಅನುಭಾವ ಲಘುಕಾವ್ಯ) ಮತ್ತು ರಾಮಧಾನ್ಯ ಚರಿತ್ರೆ(ಸಾಮಾಜಿಕ ಆಶಯವನ್ನೊಳಗೂಂಡ ಲಘುಕಾವ್ಯ)ಗಳು ಕನಕರ ವೈವಿಧ್ಯಮಯ ಮತ್ತು ಜನಪರ ನಿಲುವಿಗೆ ಸಾಕ್ಷಿಯಂತಿವೆ. ಕನಕರ ಮುಂಡಿಗೆಗಳು, ಜಾನಪದೀಯ ಸೊಗಡಿನ ಪದಗಳು, ಭಾಮಿನಿಷಟ್ಪದಿಯಲ್ಲಿ ಬರೆದು ನರಸಿಂಹಸ್ತವನಗಳು ಉಲ್ಲೇಖಾರ್ಹ. ಕನಕರು ತಮ್ಮ ಎರಡೂ ಕಾವ್ಯಗಳನ್ನು ಚೆನ್ನಿಗರಾಯ ಮತ್ತು ಕಾಗಿನೆಲೆ ಆಧಿಕೇಶವನಿಗೆ ಅಪಿ೯ಸಿದ್ದಾರೆ. ತಮ್ಮ ಕೀರ್ತನೆ ಮತ್ತು ಪದಗಳ ಮೂಲಕ ನಾಡಿನ ಜನರ ನಾಲಿಗೆಯ ಮೇಲೆ ಇಂದಿಗೂ ನಲಿದಾಡುತ್ತಿದ್ದಾರೆ.
ಕನಕದಾಸರು ಅಂದಿನ ಸಮಾಜ ವ್ಯವಸ್ಥೆಯಲ್ಲಿ ಅನುಭವಿಸಿದ ನೋವೇ ಅವರ ಕೀರ್ತನೆ ಹಾಗೂ ಪದಗಳಲ್ಲಿ ಹಾಡಾಗಿ ಹರಿದಿದೆ. ಜಾತಿ ವ್ಯವಸ್ಥೆಯನ್ನು ವಿರೋಧಿಸಿದಂತೆ ಕನಕರು ಜನರಲ್ಲಿ ತಮ್ಮ ಕೀರ್ತನೆಗಳ ಮೂಲಕ ಆದ್ಯಾತ್ಮಿಕ, ಸಾಮಾಜಿಕ ಹಾಗೂ ವೈಚಾರಿಕ ಪ್ರಜ್ಞೆಯನ್ನು ಬಿತ್ತಿದ್ದು, ಈ ಮೂರು ಅಂಶಗಳಿಂದ ಅವರ ಸಾಹಿತ್ಯ ಮುಪ್ಪುರಿಗೊಂಡಿದೆ.
ಸಮಾಜದಲ್ಲಿ ಸಮತಾ ಸಮಾಜ ನಿಮಾ೯ಣವಾಗಲೆಂಬ ಆಶಯದಿಂದ ಅವರು ಸಮಾಜವನ್ನು ಹಲ ಬಗೆಯಲ್ಲಿ ಪ್ರಶ್ನಿಸಿದ್ದಾರೆ. ಕನಕರ ಕೆಲ ಸಕಾಲಿಕ ಪ್ರಶ್ನೆಗಳಿಗೆ ನಾವು ಇಂದಿಗೂ ಉತ್ತರ ಹುಡುಕಬೇಕಿದೆ. ಉದಾ: ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ? ನೇಮವಿಲ್ಲದೆ ಹೋಮವ್ಯಾತಕೆ? ಹೊಲೆಯ ಹೊರಗಿಹನೆ? ಇನ್ನೆಷ್ಟು ಕಾಲ ನೀನು ಮಲಗಿದ್ದರೂ, ನಿನ್ನನೆಬ್ಬಿಸುವವರನೊಬ್ಬರನು ಕಾಣೆ, ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’. ನಾಲ್ಕು ಶತಮಾನಗಳ ಹಿಂದಿನ ಕನಕರ ಆತಂಕಗಳು ಇಂದಿನ ಜ್ವಲಂತ ಪ್ರಶ್ನೆಗಳಾಗಿ ಉಳಿದಿರುವುದು ಮಾತ್ರ ವಿಷಾದನೀಯ.
ಕನಕದಾಸರು ದಾಸ ಪಂಥದ ವಚನಕಾರರು ಮಾತ್ರವಲ್ಲ, ಎಲ್ಲ ಮತೀಯ ಬಂಧನಗಳಿಂದ ಪಾರಾಗಿ, ಸಾಮಾಜಿಕ ಕಟ್ಟು-ನಿಟ್ಟುಗಳಿಂದ ಮುಕ್ತರಾಗಿ, ಅಧ್ಯಾತ್ಮ ಸಿದ್ದಿಯ ಶಿಖರವನ್ನೇರಿದ ವಿಶ್ವಬಂಧು, ಸಂತ ಕವಿಯೆಂದು ದೇ.ಜವರೇಗೌಡರು ಕನಕದಾಸರ ವ್ಯಕ್ತಿತ್ವವನ್ನು ಬಣ್ಣಿಸಿರುವುದು ಯಥಾರ್ಥವಾಗಿದೆ. 

 

ಕನ್ನಡ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ

ಕನ್ನಡ ಸಾಹಿತ್ಯವನ್ನು ಜೈನ, ವೀರಶೈವ, ಬ್ರಾಹ್ಮಣ ಎಂದು ವಿಭಜಿಸುವ ಕ್ರಮವುಂಟು. ಇದು ಒಂದು ರೀತಿಯಲ್ಲಿ ಜಾತಿಯ ಆಧಾರವೆಂದು ತೋರಿದರೂ, ಅರ್ಥರಹಿತವಾದುದಲ್ಲ. ಆಯಾ ಕಾಲಕ್ಕೆ ಕನ್ನಡ ಸಾಹಿತ್ಯ ದೃಷ್ಟಿಗೆ ಪ್ರೇರಕವಾಗಿ ನಿಂತ ಶಕ್ತಿಗಳನ್ನು ಇದು ನಿರ್ದೇಶಿಸುತ್ತದೆ. ಈ ಮೂರು ಧರ್ಮಗಳಿಗೆ ಸೇರಿದ ಉಚ್ಚ ವರ್ಗದವರ ವಿನಾ ಅನ್ಯಧರ್ಮದವರಾರೂ ಕನ್ನಡ ಸಾಹಿತ್ಯ ಕೃಷಿಯಲ್ಲಿ ಪಾಲ್ಗೊಳ್ಳಲಿಲ್ಲ. ಹಾಗೆ ಪಾಲ್ಗೊಳ್ಳುವ ಅವಕಾಶವು ಅವರಿಗಿರಲಿಲ್ಲ ಎಂಬುದನ್ನು ಸೂಚಿಸುತ್ತದೆ. (ವಚನಕಾರರು ಈ ಹೇಳಿಕೆಗೆ ಹೊರತು ಎಂದರೂ, ಅವರ ಸಾಹಿತ್ಯ ನಿರ್ಮಿತಿ ಪ್ರಜ್ಞಾಪೂರ್ವಕವಾದುದಲ್ಲ ಎಂಬುದು ಕೆಲವು ವಿದ್ವಾಂಸರ ಅಭಿಪ್ರಾಯ) ವಿದ್ಯಾಭ್ಯಾಸದಿಂದ ವಂಚಿತವಾಗಿದ್ದ ಶೂದ್ರವರ್ಗಕ್ಕೆ ಸಾಹಿತ್ಯ ಎಂಬುದು ಆಕಾಶ ಕಾಯದಂತಾಗಿತ್ತು. ಆದರೆ ಸಂತ ಶ್ರೀ ಕನಕದಾಸರು ಕನ್ನಡ ಸಾಹಿತ್ಯ ಪರಂಪರೆಯ ಈ ವಿದ್ಯಮಾನಕ್ಕೆ ಏಕೈಕರಾಗಿ ಅಪವಾದ ಎಂಬಂತೆ ತೋರಿಬರುತ್ತಾರೆ. ಸಂತ ಶ್ರೀ ಕನಕದಾಸರು ಕುರುಬರ ಕುಲದಲ್ಲಿ ಜನಿಸಿದವರು. ಸಹಜ ಪ್ರತಿಭೆ ಅವರ ಪಾಂಡಿತ್ಯಪೂರ್ಣ ಕಾವ್ಯ ಕೀರ್ತನೆ, ಮುಂಡಿಗೆಗಳನ್ನು ರಚಿಸಿರುವುದು ಸೋಜಿಗ. ಅವರು ಅನುಭವಿಸಿದ ಶೂದ್ರ ಸತ್ವವೂ ಅವರ ಕವಿತೆಯ ಮೇಲೆ ಪ್ರಭಾವ ಬೀರಿದೆ. ಕನ್ನಡ ಸಾಹಿತ್ಯದ ಮಟ್ಟಿಗೆ ಮೇಲುಜಾತಿಯವರ ಗೋಪುರ ಏರಿದ ಕೀರ್ತಿ ಸಂತ ಶ್ರೀ ಕನಕದಾಸರದು.
ಕನಕದಾಸರು ಕವಿಯೂ ಹೌದು, ಕಲಿಯೂ ಹೌದು. ಅಲ್ಲದೆ ದಾಸರಲ್ಲಿ ಕವಿ, ಕವಿಗಳಲ್ಲಿ ದಾಸರೆಂಬ ಕೀರ್ತಿಗೆ ಪಾತ್ರರಾದವರು. ಈ ಸಮನ್ವಯದಲ್ಲಿ ಅವರ ಹಿರಿಮೆಯಿದೆ. ಅವರ ಕೊಡುಗೆಯ ಮಹತ್ವವಿದೆ. ಕನಕದಾಸರು ತಮ್ಮ ಮುಂಡಿಗೆಗಳ ಮೂಲಕ ಸಂಗೀತ ಪಿತಾಮಹ ಎಂದು ಪುರಂದರದಾಸರನ್ನು ಹೊಗಳುವ ಮೂಢಮತಿಗಳು ಕನಕದಾಸರ ಸಂಗೀತ ಜ್ಞಾನ ಕುರಿತು ಅಧ್ಯಯನ ಮಾಡಿಲ್ಲ. ದಾಸಸಾಹಿತ್ಯಕ್ಕೆ ಕನಕದಾಸರದು ಸಿಂಹಪಾಲು. ಸಂಗೀತದಲ್ಲಿ ಪುರಂದರದಾಸರೆಷ್ಟು ಮುಖ್ಯವೋ ಅಷ್ಟೇ ಕನಕದಾಸರೂ ಮುಖ್ಯ.
ಒಬ್ಬ ಮಹಾನ್ ಋಷಿಯೂ, ಕವಿಯೂ ಆಗಿದ್ದ ಕನಕದಾಸರು, ಇನ್ನುಳಿದ ದಾಸರಿಗಿಂತ ವಿಭಿನ್ನರಾಗಿ ತೋರುತ್ತಾರೆ. ಅವರ ಕಾವ್ಯ ನಿರ್ಮಾಣ ಪ್ರಜ್ಞೆಯಿಂದ ವಸ್ತುನಿಷ್ಠ ಕೃತಿಗಳನ್ನೂ ಕೊಟ್ಟಿದ್ದಾರೆ. ‘ನಳಚರಿತ್ರೆ’, ‘ಮೋಹನ ತರಂಗಿಣಿ’, ‘ರಾಮಧಾನ್ಯ ಚರಿತ್ರೆ’ ಇವು ಕನಕದಾಸರ ವಸ್ತುನಿಷ್ಠ ಕಾವ್ಯಗಳು. ಇವರ ನಳಚರಿತ್ರೆಯಷ್ಟು ಸರಳ ಮತ್ತು ಜನಪ್ರಿಯ ಕಾವ್ಯ ಕನ್ನಡದಲ್ಲಿ ವಿರಳ. ‘ಮೋಹನ ತರಂಗಿಣಿ’ ಭಕ್ತಿಯ ಕವಚ ತೊಟ್ಟು, ಶೃಂಗಾರ ಪ್ರಧಾನವಾಗಿ ರೂಪ ತಾಳಿತು. ‘ರಾಮಧಾನ್ಯ ಚರಿತೆ’ಯಂತೂ ಸಾಮಾಜಿಕ ವರ್ಗ, ಪ್ರಜ್ಞೆ, ವೈಚಾರಿಕತೆಯನ್ನು ಬೆರಗುಗೊಳಿಸುವಂತೆ ಮೂಡಿ ಬಂದಿದೆ. ರಾಮಧಾನ್ಯ ಚರಿತ್ರೆ ಮೇಲು-ಕೀಳೆಂಬ ಹಿನ್ನೆಲೆಯಲ್ಲಿ ಪ್ರಸ್ತುತ ಸಮಾಜಕ್ಕೂ ಉತ್ಕೃಷ್ಟ ನಿದರ್ಶನವಾಗಿದೆ.
 
‘ಹರಿಭಕ್ತಿಸಾರ’ ಒಂದು ಸುಂದರವಾದ ಭಕ್ತಿನಿರ್ಭರ ಭಾವಗೀತೆಯಂತಿದೆ ಕವಿಯ ಅಂತರಂಗದಿಂದ ಸ್ಪುರಿಸಿ, ನೇರವಾಗಿ ಓದುಗರ ಮನ ತಟ್ಟುತ್ತದೆ. ಕಾವ್ಯವು ಯಾವುದೇ ಬೆಡಗು ಬಿನ್ನಾಣಗಳಿಲ್ಲದೆ ಸಾಗುತ್ತದೆ. ಸಮರ್ಪಣ ಶರಣಾಗತಿಗಳ ನಿಲವು ‘ರಕ್ಷಿಸು ನಮ್ಮನನವರತ’. ಈ ಶತಕದ ಪ್ರತಿಪದ್ಯದಲ್ಲೂ ಬರುವುದು ಗಮನಾರ್ಹ. ಅಲ್ಲಿ ಕನಕದಾಸರು ರಕ್ಷಿಸುನನ್ನವನರತ ಎನ್ನದೆ ‘ನಮ್ಮನನವರತ’ ಎಂದಿರುವುದು ಸರ್ವೋದಯ ದೃಷ್ಟಿಯನ್ನು ಕಾಣುತ್ತೇವೆ. ಒಟ್ಟಾರೆ ಸಮಾಜದ ಪಾಪಗಳ ಮಧ್ಯೆ ಸಿಕ್ಕು ನರಳುವ ಮನುಷ್ಯ ಅದರಿಂದ ಬಿಡುಗಡೆಗೊಳ್ಳಬೇಕೆಂಬುದೇ ಈ ಕೃತಿಯ ಮುಖ್ಯ ಆಶಯ.

ಸಂತ ಶ್ರೀ ಕನಕದಾಸರು ಕೀರ್ತನೆಗಳನ್ನು ರಚಿಸುವಾಗ ಅವರಿಗೆ ಸಮಕಾಲೀನ ಸಮಾಜದ ಜೀವನಾನುಭವಗಳು ಇಲ್ಲವೆಂದಲ್ಲ. ಭಗವಂತನನ್ನು ಕೀರ್ತಿಸುತ್ತಲೇ ಸಮಾಜದ ಲೋಪದೋಷಗಳನ್ನು ತಿದ್ದಿದರು. ಡಾಂಭಿಕ ಭಕ್ತರನ್ನು ಬಯಲಿಗೆಳೆದರು. ಮತಧರ್ಮಗಳು ಕಟ್ಟಿದ ಮೇಲ್ಜಾತಿಯ ಭ್ರಮೆಗಳ ಕಟ್ಟು ಬಿಡಿಸಿದರು. ಇಂಥ ಪ್ರಗತಿಪರ ಧೋರಣೆಗಳನ್ನು ಮತ್ತು ಬಂಡಾಯದ ಧ್ವನಿಗಳನ್ನು ಬೇರಾವ ದಾಸರಲ್ಲಿ ಕಾಣಲು ಸಾಧ್ಯವಾಗದು. ಕೀರ್ತನೆಗಳಲ್ಲಿ ಹರಿಸ್ತುತಿಯೊಂದಿಗೆ, ಅಧ್ಯಾತ್ಮ ಹಾಗೂ ಶೂದ್ರಪರ ಚಿಂತನೆಯ ಆಯಾಮಗಳನ್ನು ತೊಡಗಿಸಿದ್ದಾರೆ. ಜೀವನದ ಆಗುಹೋಗು, ಶೋಷಿತ ಸಮಾಜದ ಅಳಲು, ಸಂಸಾರ ನಿಸ್ಸಾರತೆಗಳಿಂದ ಹಿಡಿದು, ಸಮಕಾಲೀನ ಸಮಾಜದ ಜೀವಂತ ಚಿತ್ರಣವಾಗುವಲ್ಲಿ ಕೀರ್ತನೆಗಳು ಸಾಕ್ಷಿಯಾಗಿವೆ.

ಸಂತ ಶ್ರೀ ಕನಕದಾಸರ ಸಾಹಿತ್ಯಕ ಕೃಷಿ ತುಂಬಾ ವೈವಿಧ್ಯಮಯವಾದುದು. ಕೃತಿಗೆ ಆಯ್ಕೆ ಮಾಡಿಕೊಳ್ಳುವ ವಸ್ತುವಿನಿಂದ ಹಿಡಿದು ಅದರ ಅಭಿವ್ಯಕ್ತಿಯ ಕ್ರಮದವರೆಗೂ ಅವರದೇ ಆದ ವಿಶೇಷಗಳಿವೆ. ಅವರ ಕೃತಿಗಳ ವೈವಿಧ್ಯತೆ ಅಡಗಿರುವುದೇ ಅವುಗಳ ಶೈಲಿಯಲ್ಲಿ. ಷಟ್ಪದಿ, ಸಾಂಗತ್ಯ ಕೀರ್ತನೆ, ಮುಂಡಿಗೆ ಉಗಾಭೋಗ ಮುಂತಾದ ಪ್ರಕಾರಗಳಲ್ಲಿನ ಆ ಸೊಗಸನ್ನು ಮೆಚ್ಚುವಂತದ್ದು. ಒಟ್ಟಿನಲ್ಲಿ ಸಂತ ಶ್ರೀ ಕನಕದಾಸರ ಈ ಎಲ್ಲ ಸ್ವೋಪಜ್ಞ ಸಾಧನೆ, ಸಿದ್ದಿಗಳನ್ನು ಪರಿಭಾವಿಸಿದಾಗ ಕನ್ನಡ ಸಾಹಿತ್ಯಕ್ಕೆ ಅವರು ಕೊಟ್ಟ ಕೊಡುಗೆ ವಿಶಿಷ್ಟ ಮತ್ತು ಅನನ್ಯ.

 

Search site

shivanand.bh@gmail.com